ಬೆಂಗಳೂರು: ರಾಜ್ಯ ಸರ್ಕಾರದ 100 ದಿನಗಳ ಸಾಧನೆಯ ಅಂಗವಾಗಿ ವಿಧಾನಸೌಧದ ಬಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಬಲಿಷ್ಠ ಕರ್ನಾಟಕ’ ನಿರ್ಮಾಣಕ್ಕೆ ಮೂರು ಮಹಾ ಸಂಕಲ್ಪಗಳು ಹಾಗೂ ಒಂಬತ್ತು ಪ್ರಮುಖ ಗುರಿಗಳನ್ನು ಘೋಷಿಸಿದರು.
“ಆರ್ಥಿಕವಾಗಿ ಸದೃಢ, ಸಾಮಾಜಿಕವಾಗಿ ಸಶಕ್ತ, ತಂತ್ರಜ್ಞಾನದಲ್ಲಿ ಮುಂದುವರಿದ ಹಾಗೂ ಮೌಲ್ಯಗಳಲ್ಲಿ ಆಳವಾಗಿ ಬೇರೂರಿದ ಕರ್ನಾಟಕವನ್ನು ನಿರ್ಮಿಸುವುದು ನಮ್ಮ ಗುರಿ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮೂರು ಮಹಾ ಸಂಕಲ್ಪಗಳು
- 1 ಟ್ರಿಲಿಯನ್ ಡಾಲರ್ ಆರ್ಥಿಕತೆ: 2037ರ ವೇಳೆಗೆ ಕರ್ನಾಟಕದ ಆರ್ಥಿಕತೆಯನ್ನು ಪ್ರಸ್ತುತ 0.343 ಟ್ರಿಲಿಯನ್ ಡಾಲರ್ನಿಂದ 1 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಗುರಿ.
- ಅಪೌಷ್ಟಿಕತೆ ನಿಯಂತ್ರಣ: ರಾಜ್ಯದಲ್ಲಿ ಅಪೌಷ್ಟಿಕತೆಯ ಪ್ರಮಾಣವನ್ನು ಶೇ.5ಕ್ಕಿಂತ ಕಡಿಮೆಗೊಳಿಸುವ ಸಂಕಲ್ಪ.
- ಶೂನ್ಯ ಬಡತನ ಮತ್ತು ಶಾಲಾ ತೊರೆಯುವಿಕೆ: ಬಡತನ ಹಾಗೂ ಶಾಲಾ ತೊರೆಯುವಿಕೆಯ ಪ್ರಮಾಣವನ್ನು ಶೂನ್ಯಕ್ಕೆ ತರುವ ಗುರಿ.
- ಬಲಿಷ್ಠ ಕರ್ನಾಟಕಕ್ಕಾಗಿ 9 ಸಂಕಲ್ಪಗಳು
- 1. ಆರೋಗ್ಯ:
- ಕೈಗೆಟುಕುವ, ಸುಲಭವಾಗಿ ಲಭ್ಯವಾಗುವ ಹಾಗೂ ಅತ್ಯಾಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು. ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವುದು, ಮುಖ್ಯಮಂತ್ರಿಗಳ ಹೊಸ ವಿಮಾ ಯೋಜನೆ ಜಾರಿಗೊಳಿಸುವುದು ಹಾಗೂ ಆರೋಗ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮೆಡಿಸಿಟಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
- 2. ಶಿಕ್ಷಣ:
- ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪುನಶ್ಚೇತನಗೊಳಿಸುವುದು. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ಉತ್ತಮ ಗುಣಮಟ್ಟದ, ಕೈಗೆಟುಕುವ ಸಾರ್ವಜನಿಕ ಶಿಕ್ಷಣಕ್ಕೆ ಆದ್ಯತೆ ನೀಡಲು ಸಂಕಲ್ಪಿಸಲಾಗಿದೆ.
- 3. ಜಲ ಭದ್ರತೆ:
- ರಾಜ್ಯದ ಜಲ ಭವಿಷ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ವೇಗ ನೀಡುವುದು. ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸುವುದರ ಜೊತೆಗೆ ರಾಜ್ಯಾದ್ಯಂತ ಜಲಮೂಲಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು.
- 4. ಹೂಡಿಕೆ ಮತ್ತು ಆರ್ಥಿಕ ಬಲ:
- ಜಾಗತಿಕ ಹೂಡಿಕೆ ಹಾಗೂ ಅನಿವಾಸಿ ಭಾರತೀಯರ ವ್ಯವಹಾರಗಳ ಇಲಾಖೆಯನ್ನು ಸ್ಥಾಪಿಸಲಾಗಿದ್ದು, ಕೈಗಾರಿಕೆ ಮತ್ತು ಐಟಿ-ಬಿಟಿ ಇಲಾಖೆಗಳ ಸಹಯೋಗದೊಂದಿಗೆ ₹3 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ.
- 5. ಬೆಂಗಳೂರು ಅಭಿವೃದ್ಧಿ:
- ಬೆಂಗಳೂರಿನಲ್ಲಿ ಲಾಲ್ಬಾಗ್ನಷ್ಟೇ ದೊಡ್ಡದಾದ ಐದು ಹೊಸ ಹಸಿರು ತಾಣಗಳನ್ನು ನಿರ್ಮಿಸುವುದು ಹಾಗೂ ಏಳು ಕೆರೆಗಳನ್ನು ಪುನಶ್ಚೇತನಗೊಳಿಸುವ ಗುರಿ ಘೋಷಿಸಲಾಗಿದೆ.
- 6. ಪ್ರಾದೇಶಿಕ ಸಮತೋಲನ:
- ಬೆಂಗಳೂರಿನ ಆಚೆಯೂ ಸಮಾನ ಅಭಿವೃದ್ಧಿಗೆ ಉತ್ತೇಜನ ನೀಡಲು ಐದು ಹೊಸ ಪ್ರಮುಖ ನಗರಗಳನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಲಾಗಿದೆ.
- 7. ಸಾಮಾಜಿಕ ನ್ಯಾಯ:
- ರಾಜ್ಯದಲ್ಲಿನ ವಸತಿ ಹೀನರಿಗೆ ಐದು ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ.
- 8. ಬಂಡವಾಳ ಹೂಡಿಕೆ – ‘ಬಿಲ್ಡ್ ಕರ್ನಾಟಕ’:
- ಕರ್ನಾಟಕದ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ಮುಂದಿನ 500 ದಿನಗಳಲ್ಲಿ ₹1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡುವ ಗುರಿ ಘೋಷಿಸಲಾಗಿದೆ.
- 9. ಉದ್ಯೋಗ ಮತ್ತು ಡಿಜಿಟಲ್ ಆಡಳಿತ:
- ರಾಜ್ಯಾದ್ಯಂತ ಒಂದು ಲಕ್ಷ ಸರ್ಕಾರಿ ಉದ್ಯೋಗಗಳು ಹಾಗೂ ಐದು ಲಕ್ಷ ಖಾಸಗಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಇದೇ ವೇಳೆ ಭೂ ದಾಖಲೆಗಳ ಸಂಪೂರ್ಣ ಡಿಜಿಟಲೀಕರಣಕ್ಕೂ ಆದ್ಯತೆ ನೀಡಲಾಗುವುದು.
